ಬುಧವಾರ, ನವೆಂಬರ್ 2, 2016

ಅಪ್ಪ ಅಂದರೆ....!!

ಮರೆತು ಬಿಡಬೇಕಿದೆ ಎಲ್ಲವೂ
ಊರಾಚೆಗಿನ ಬಯಲು
ಅಪ್ಪನ ಹಳೆ ಸೈಕಲ್
ಮುಟ್ಟಿದರೆ ಮುನಿಯುವ ಕರಿಯ ಆಡು
ಅಪ್ಪನ ಬೀಡಿಬ್ರಾಂಚಿನ ಘಾಟು
ನಿನ್ನೆ ಬಸ್ಸಲಿ ನನ್ನ ಪಕ್ಕ
ಯಾರೋ ಮುದುಕನೋರ್ವ
ಬಂದು ಕುಳಿತಿದ್ದ...
ಯಾಕೋ ನಿನ್ನ ಘಾಟು ತಲೆಯಲಿ
ಕೊರೆಯುತಿತ್ತು.. ಮೌನಿಯಾದೆ
ಆತನ ಹೆಗಲಿಗೆ ತಲೆಯಾನಿಸಿ
ಬಿಕ್ಕಿ ಬಿಕ್ಕಿ ಅತ್ತೆ
ಏನೆಂದು ಕೇಳಲಿಲ್ಲ ಆತ
ಮೆದುವಾಗಿ ತಲೆ ಸವರಿದ
ಇಳಿಯುವಲ್ಲಿ ಇಳಿದು ಹೋದ
ನೀ ಹೋದಂತೆ ತಿರುಗಿಯೂ ನೋಡದೆ...
ಮರೆಯಬೇಕು ಎಲ್ಲವನ್ನೂ
ನಿನ್ನ ಕತ್ತಿಗೆ ಚುಚ್ಚಿದ್ದ ಡಯಾಲಿಸಿಸ್ ನ
ಪೈಪುಗಳ ನೀಳವನು
ನೀ ನನ್ನ ನೋಡಿದ
ಕೊನೇಯ ನೋಟವನು
ವಿಧಿಯಿಲ್ಲದೇ ನಿನ್ನ ಪ್ರೀತಿಯ
ಆಡನ್ನು ಮಾರಿದ ಬಳಿಕ
ನಾವರಿಯದಂತೆ ಮನೆಯ ಹಿಂಬದಿ
ಕಣ್ಣೀರಿಟ್ಟ ಘಳಿಗೆಯನು
ಮರೆಯಾಗುತ್ತೇನೆ ನಾನೂ ಒಂದುದಿನ
ನಿನ್ನಂತೇ ಒಂದಷ್ಟು ನೆನಪುಗಳ
ಬಲ್ಲವರ ಮನದಲಿಟ್ಟು
ನೀ ನೆಟ್ಟ ಕಂಗಿನ ಮರ
ಪಿಂಗಾರವರಳಿಸಿದೆ
ಬಂಗಾರವುದುರಿಸ‌ಲೇಬೇಕು
ಈ ತಗಡು ಜೀವನದಲಿ....

-ಮುಆದ್

ಶುಕ್ರವಾರ, ಜುಲೈ 22, 2016

ನನ್ನ ಗಂಡೆದೆಯ ಹಾಲು
ಕುಡಿದ ಮೊದಲ ಹೆಣ್ಣು ಅವಳು,

ಅವಳ ಕನಸುಗಳ ಬಸಿರ ಹೊತ್ತ
ಮೊದಲ ಗಂಡು ನಾನು...

ದೇಹ, ಲೋಕಗಳ ಹಂಗಿಲ್ಲದ
ನಾವು ಆತ್ಮ ಸಂಚಾರಿಗಳು..

ಲೋಕ ಹೇಳುತ್ತದೆ...
ಪ್ರೀತಿಗೆ ಸಾವುಂಟು....




ಮಂಗಳವಾರ, ಮೇ 26, 2015

ನ್ಯೂ ಜನರೇಷನ್.

ನ್ಯೂ ಜನರೇಷನ್...

ನಾವು ನ್ಯೂ ಜನರೇಷನ್
ಓಡುವೆವು ಎಡವುವೆವು
ಮತ್ತೇ ಏಳುವೆವು
ಓಟದಲ್ಲೇ ಹಣಗಳಿಸುವೆವು
ಬಿದ್ದರೆ ಚಿಂತೆಯಿಲ್ಲ
ಗೆದ್ದರೆ ನಮ್ಮದೇ ಜಗವೆಲ್ಲ
ವ್ಯತ್ಯಾಸವೊಂದೇ...
ಓಡುತಿರುವುದು ಮಣ್ಣಿನಲ್ಲಲ್ಲ
ಟೆಂಪಲ್ ರನ್ನಿನಲ್ಲಿ

ನಾವು ನ್ಯೂ ಜನರೇಷನ್
ವಾರಕ್ಕರೆಡು ಸ್ನಾನ
ನೀರಿನಲ್ಲಿ ಹೋದ ಮಾನ
Axe ಅಲ್ಲಿ ಬರಿಸುವವನೇ ಜಾಣ
ಮೊಬೈಲ್ ಕಂಪೆನಿಗೋ
ಸಿಕ್ಕಾಪಟ್ಟೆ ದಾನ

ಬಾಯಲ್ಲಿ ದೇವ
ನಡತೆಯಲ್ಲಿ ದೆವ್ವ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ
ಬ್ರಾಂಡೆಡ್ ಮೆಟ್ಟು ತಪ್ಪದು
ಹರಿದ ಶರ್ಟು
ಜಾರಿದ ಪ್ಯಾಂಟು
ಜೆಲ್ಲೆಂಬ ಅಮೃತದಿ
ತಲೆಯೆಲ್ಲ ಅಂಟಂಟು

ತಿನ್ನೋದಿಕ್ಕೆ ಬರ್ಗರ್
ಹೊಟ್ಟೆಯೆಲ್ಲಾ ಗರ್ಗರ್
ಬಂಗಾಳಿಯಂಗಡಿಯ ಬೇಲ್
ಶೌಚಕ್ಕೂ ಬೇಕು ಎ.ಸಿ ಮಾಲ್
ಅಯ್ಯೋ ನಾನು ನ್ಯೂ ಜನರೇಷನ್!!!
ಮನೆಯಲ್ಲಿಲ್ಲ ನಾಳೆಯ ರೇಷನ್...

-ಮುಆದ್ ಜಿ.ಎಂ

ಶನಿವಾರ, ಏಪ್ರಿಲ್ 4, 2015

ಪುಳಿ ಕದ್ದ ಸ್ವಾರಸ್ಯ....

ಬಾಲ್ಯದಲ್ಲಿ ಕದ್ದು ತಿನ್ನುವ ಚಪಲವಂತೂ ಬಹುತೇಕ ಮಂದಿಗೆ ಇದ್ದೇ ಇರುತ್ತದೆ... ಒಂದು ದಿನ ಶಾಲೆ ಮುಗಿದ ಬಳಿಕ ಅಂದು ಶನಿವಾರವಿರಬೇಕೆಂಬುದು ನನ್ನ ನೆನಪು...

ಗದ್ದೆ ಪುಣಿಯಿಂದಾಗಿ ನಮ್ಮ ಪಟಾಲಂ ಹೊರಟಿತು... ಈ ಗದ್ದೆ ಪುಣಿಯಿಂದಾಗಿ ಸುತ್ತಿ ಬಳಸಿ ಹೋಗಲು ಕಾರಣವೂ ಇದೆ... ಅದೇ ದಾರಿಯಲ್ಲಿ ನಮ್ಮ ಅದ್ದಾಕ ರ ಸೂಪರ್ ಉಪ್ಪಿನಕಾಯಿಯ ಫ್ಯಾಕ್ಟರಿ ಸಿಗ್ತಾ ಇತ್ತು..ಉಪ್ಪಿನಕಾಯಿಯ ಮಾವಿನ ಹೋಳೊಂದನ್ನು ಕೈಗೆ ಹಾಕಿಸಿಕೊಂಡು ಚಪ್ಪರಿಸುತ್ತಾ ಮನೆಯ ದಾರಿ ಹಿಡಿಯುತಿದ್ದೆವು...

ಎಂದಿನಂತಯೇ ಅಂದೂ ನಾವು ಹೊರಟೆವು..ದಾರಿಯಲ್ಲಿ ಮೈ ಪೂರಾ ಒಡವೆ ದರಿಸಿದಂತೆ ಕಣ್ಣಿಗೆ ಕುಕ್ಕುತ್ತಿತ್ತು ಗುರುವಪ್ಪನ ಪುಳಿಯ ಮರ (ಹುಣಸೇ ಹಣ್ಣಿನ) ... ಒಬ್ಬೊಬ್ಬರೇ ಮುಖಮುಖ ನೋಡಲು ಶುರು ಹಚ್ಚಿದರು ನಾನು ಮುಖ ನೋಡಲು ತಲೆಯೆತ್ತಿದಾಗ ನಮ್ಮ ಪೈಕಿ ಮೂವರು ಮರ ಹತ್ತಿಯಾಗಿತ್ತು...

ನಾವು ಕೆಲವರು ಹಿಂದುಳಿದ.ವರ್ಗಕ್ಕೆ ಒಳಪಟ್ಟವರು ಯಾಕೆಂದರೆ ನಮಗೆ ಅವರಷ್ಟು ವೇಗವಾಗಿ ಮರ ಹತ್ತಲಾಗುತ್ತಿರಲಿಲ್ಲ... ನಾವೇನಿದ್ದರೂ ಸಿಕ್ಕ ಸಿಕ್ಕ ಪೊದೆಯೊಳಗೆ ಕೈ ತೂರಿಸಿ ಹಣ್ಣು ಹೆಕ್ಕಲು ಮಾತ್ರ ಮೀಸಲು..

ಹೇಗೂ ನಾಲ್ಕೈದು ಪುಳಿ ಉದುರಿಸಿಯಾಗಿತ್ತು.. ಇನ್ನೇನು ಪುಳಿಯ ಜೊಂಕೆ (ಗೊಂಚಲು)ಗೆ ಕೈ ಹಾಕಬೇಕನ್ನುವಷ್ಟರಲ್ಲಿ ಎಲ್ಲಿಂದಲೋ ಒಂದು ಭಯಂಕರ backround voice ಅಬ್ಬರಿಸಿ ಬಂತು.. "ಏರ್ ಯಾ ಅವು ***ಮಗೆ ****ಮಗೆ***..
.... (ಯಾರೋ ಅದು *** ಮಗ ***ಮಕ್ಳಾ

) ಮರದೊಡೆಯ ಗುರುವಪ್ಪ ದಾಪುಗಾಲಿಡುತ್ತಾ ಬರುತ್ತಿದ್ದ...

ಕೆಳಗಿದ್ದ ನಾವೆಲ್ಲ ಎದ್ದೆನೋ ಬಿದ್ದೆನೋ ಅಂತ ಜೇಬು ಸರಿಪಡಿಸಿಕೊಂಡು ಓಡಿದೆವು... ಮರದ ಮೇಲಿದ್ದವರು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸರಸರ ನೆ ಜಾರಿ ಮರದ ಬುಡದಲ್ಲಿದ್ದರು...ಒಬ್ಬನನ್ನು ಹೊರತುಪಡಿಸಿ...ಆತ ಮರದ ತುದಿಯಲ್ಲೇ ಮೊಕ್ಕಾಂ ಹೂಡಿದ್ದ.. ನಾವೆಲ್ಲಾ ದೂರದಿಂದಲೇ ಆತನ ಅಸಾಮಾನ್ಯ ಧೈರ್ಯವನ್ನು ಹೊಗಳಿದ್ದೇ ಹೊಗಳಿದ್ದು..
ಪಕ್ಕದಲ್ಲಿದ್ದವನೊಬ್ಬ ಹೇಳುತ್ತಿದ್ದ, "ಹೇ! ಅವನದ್ದು ಬಯಂಕರ ದೈರ ಮಾರೇ ಅವ ಮೊದಲಿನಿಂದಲೂ ಹಾಗೆವೇ"
ಗುರುವಪ್ಪ ಕೋಪದಿಂದ ನಿಸುಡುಯ್ಯುತ್ತಿದ್ದ..
ನಮ್ಮ ಕಣ್ಣುಗಳಂತೂ ಎವೆ ಬಿಡದೆಯೇ ಕುತೂಹಲಭರಿತವಾಗಿ ಇವರಿಬ್ಬರನ್ನೇ ಗಮನಿಸುತ್ತಿತ್ತು..
ಅಷ್ಟರಲ್ಲಿ ಮರದ ಮೇಲಿದ್ದ ಅಪ್ಪಿ ಗುರುವಪ್ಪನನ್ನು ನೋಡಿ,

ಅಣ್ಣಾ ಅಣ್ಣಾ ಒಂಜಿ ಪುಳಿ ದೆಪ್ಪಡಾ... ಅಂತ ದೈನ್ಯತೆಯಿಂದ ಬೇಡುವಾಗಲೇ..ಗುರುವಪ್ಪನ ಬಾಯಿಯಿಂದ... ಇಲಿ ಕೀಲ್ ರಂಡ್*****ಮೋನೇ...ಅಂತ ತರಹೇವಾರಿ ಬೈಗುಳ ಬೀಳುವಾಗ ನಾವು ಮರದ ಮೇಲೆ ನೋಡಿದರೆ ಅಪ್ಪಿ ನಾಪತ್ತೆ...
ನಮ್ಮ ಧೈರ್ಯಶಾಲಿ ಅಪ್ಪಿ ನನ್ಮಗ ಪುಳಿಮರದ ಬುಡದಲ್ಲಿ ಮಕಾಡೆ ಮಲಗಿದ್ದ... ಬಂದ ನಗುವನ್ಮು ತಡೆದುಕೊಂಡು ಓಲೇಮಾಲೇ ಓಯ್ಸಾ ಅಂತ ಎತ್ಕೊಂಡೋದ್ವಿ...

ಅಂತೂ ಪುಳಿಗೆ ಬಂದ ಅಪ್ಪಿ ಎರಡು ದಿನ ಚಳಿಜ್ವರದ ಪಾಲಾಗಿದ್ದ....

-ಮುಆದ್

ಬುಧವಾರ, ಡಿಸೆಂಬರ್ 10, 2014

ನನ್ನ ಬಾಲ್ಯ-1

ಚಳಿಗಾಲ ಬಂದಾಗ ಮೊತ್ತ  ಮೊದಲು ನೆನಪಾಗುವುದು ನನ್ನ ತಾಯಿ.. ನನ್ನ ಬಾಲ್ಯದಲ್ಲಿ ಚಳಿಗಾಲದ ಆಗಮನವಾದಾಗ ರಾತ್ರಿ ಮುಸುಕೆಳೆದುಕೊಂಡು ಕಂಬಳಿ ಹೊದ್ದು
ಮಲಗಿದರೆ ಆಕಾಶವೇ ಸಿಡಿದು ಬಿದ್ದರೂ ಎಚ್ಚರವಾಗುವುದಿಲ್ಲ...
ಇಂತಹಾ ವೇಳೆಯಲ್ಲಿ ನನ್ನಮ್ಮನ ಮುಂಜಾನೆಯ ವ್ಯರ್ಥ ಪ್ರಲಾಪ ಬೇರೆ ...
ನನ್ನ ನಿದಿರೆಗೆ ಭಂಗ ತಾರದೆ ಅಮ್ಮ ಹಿಂದಿರುಗಿ ಹೋಗಬೇಕಾದರೆ ನನ್ನ ಬತ್ಥಳಿಕೆಯಲ್ಲುಳಿದಿದ್ದುದು
ಒಂದೇ ಅಸ್ಥ್ರ...
ಅಮ್ಮನ ಕೈಯನ್ನು ಕಂಬಳಿಯೊಳಕ್ಕೆಳೆದುಕೊಂದು ಹಣೆ ಮುಟ್ಟಿಸಿಕೊಳ್ಳುತಿದ್ದೆ ....
ಸ್ವಲ್ಪ ಬಿಸಿಯಿದ್ದರೂ ಸಾಕು ಅಮ್ಮ ನನ್ನ ಹಾಗೆ ಬಿಟ್ಟು ಹೋಗುತಿದ್ದರು
ಅಮ್ಮನ ಪೆದ್ದುತನಕ್ಕೆ ನಾನು ಒಳಗೊಳಗೆ ನಕ್ಕು ಬಿಡುತ್ತಿದ್ದೆ . 
(ಪೆದ್ದ್ದ ನಾನೇ ಎಂಬುವುದು ಅಂದು ಅರಿವಾಗಿರಲಿಲ್ಲ )
ಬೆಳಿಗ್ಗೆ ೧೦ ಗಂಟೆ ಕಳೆದ ನಂತರ ಜ್ವರದ ಪತ್ತೆಯೇ ಇರುತಿರಲಿಲ್ಲ...  
ಅಪ್ಪನೊಂದಿಗೆ ಬೀಡಿ ಬ್ರಾಂಚ್ ಗೋ
ಇಲ್ಲಾ ಊರು ಸುತ್ತ್ಹೊಕ್ಕೆ ಹೊರದುತ್ತಿದ್ದೆ...   


(ಮುಂದುವರೆಯುವುದು) 

ಭಾನುವಾರ, ಡಿಸೆಂಬರ್ 7, 2014

ಓ ಗಾಂಧೀ....
#11
ನಿನ್ನನ್ನೇಕೆ ಬೂಂದಿ ಲಾಡೊಳು ಸೇರಿಸಿ ಸ್ವಾತಂತ್ರ್ಯಕೆ ನಾಂದಿ ಹಾಡುತಿರುವರು??
ತರಿದ ದೇಹಗಳಿಗೆ,
ಹರಿದ ಬಟ್ಟೆಗಳಿಗೆ,
ಸೋರುತಿರುವ ಮನೆಗಳಿಗೆ,
ನಾರುತಿರುವ ಮನಗಳಿಗೆ,
ಬೇಡುತಿರುವ ಕೈಗಳಿಗೆ,
ದೂಡುತಿರುವ ಮೈಗಳಿಗೆ,
ಹಸಿದು ಬಾಯ್ದೆರೆದು ನಿಂತ ಕೊಳವೇಬಾವಿಗಳಿಗೆ,
ಕೊಲೆಗಡುಕರ ನಡುಗದ ಕೈಗಳಿಗೆ,
ಆಳುತಿರುವ ಜನನಾಯಕರಿಗೆ,
ಅಳುತಿರುವ ಜನತೆಗೆ,
ಗಾಳದ ಕೊಕ್ಕೆಯ ಹಿಡಿದ ಮೀನುಗಳಿಗೆ,
 ಸಾಲದ ತೆಕ್ಕೆಯೊಳಿರುವ ರೈತನಿಗೆ,
ಭ್ರೂಣದೊಳು ಕರಗುತಿರುವ ಹೆಣ್ಣು ಜೀವಗಳಿಗೆ,
ಅಂಗಾತ ಬಿದ್ದಿರುವ ಅನಾಥ ಶವಗಳಿಗೆ,
ಕೋರೆಯೊಳು ಹಾರಾಡುತಿರುವ ಕಲ್ಲಿನ ಚೂರುಗಳಿಗೆ,
ಕೊಡಲಿಗೆ ಆಹುತಿಯಾಗುತಿರುವ ವ್ರಕ್ಷದ ಬುಡಗಳಿಗೆ,
ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣಗಳಿಗೆ,
ಕಂಬಿಯ ಹಿಂದಿರುವ ಅಮಾಯಕ ಸಹೋದರರಿಗೆ,
ದಲಿತನ ವೇದನೆಭರಿತ ನಿಟ್ಟುಸಿರುಗಳಿಗೆ,
ಇದ ಬರೆದ ನನ್ನ ಅಸಹಾಯಕ ಕೈಗಳಿಗೂ,
ಓದುತಿರುವ ನಿಮ್ಮ ಸಂದಿಗ್ದ ಮನಗಳಿಗೂ
ಸ್ವಾತಂತ್ರ್ಯದ ಶುಭಾಷಯಗಳು
-ಮುಆದ್- (muaad gm)

ಶನಿವಾರ, ಡಿಸೆಂಬರ್ 6, 2014

ಗೆಳತೀ,
ನಿನ್ನ ಹ್ರದಯ ಮನೆಯ ಅಟ್ಟದೊಳು
ದೂಳು ತಿನುತ ಬಿದ್ದಿರುವ
ನನ್ನ ಪ್ರೇಮ ಪತ್ರವನೊಮ್ಮೆ
ಬಿಡಿಸಿ ನೋಡುವೆಯಾ...
ಜೋರಾಗಿ ಕೊಡವದಿರು, ನನಗೆ ಧೂಳು ಅಲರ್ಜಿ



ಬಸ್ಸಿನ ಕಿಟಕಿ ಪಕ್ಕದೊಳು
ಕೂರಲೇಕೋ ಭಯವಾಗುತಿದೆ ಎನಗೆ,
ನೀನೆಲ್ಲಿ ಕುಳಿರ್ಗಾಳಿಯಾಗಿ ಬಂದು
ನನ್ನೆದೆಯ ಸೋಕಿ ಪ್ರೇಮಜ್ವರದ
ಸೋಂಕು ತಗುಲಿಸಿಬಿಡುವೆಯಾ ಎಂದು,
ಈಗಿನ ಜ್ವರಗಳು ಬೇಗನೇ ವಾಸಿಯಾಗುವುದಿಲ್ಲವಂತೆ.......



ನನ್ನ ಕಣ್ಣೊಳು ತುಂಬಿರುವ ಕಣ್ಣೀರ ನೋಡಿ
ರಸ್ತೆಯಲಿ ನೀರು ತುಂಬಿರುವ ಹೊಂಡಗಳೂ
ನಾಚುತಿವೆ,
ಸರಕಾರ ತೇಪೆ ಹಚ್ಚುತಿದೆಯಂತೆ
ಪರಿಹಾರ ಸಿಗಬಹುದೇನೋ.....



ನನ್ನೆಡೆ ನೋಡದೇ ಮುಗುಮ್ಮಾಗಿ
ಕುಳಿತಿರುವ ನಿನಗೆ
ಯಾರದೋ ವಕ್ರ ದ್ರಷ್ಟಿ ಬಿದ್ದಿರಬೇಕು,
ಬಾರಮ್ಮಾ ಮನೆಗೆ..
ಅಮ್ಮನಿಗೆ ಹೇಳಿ ದರ್ಷ್ಟಿ ತೆಗೆಸಿಬಿಡುವೆ,
ನಿರ್ಲಕ್ಷ್ಯವೆಂಬ ಬಟ್ಟಲಿಗೊಮ್ಮೆ
ಮೂರು ಸಾರಿ ಥೂ... ಎಂದು ಉಗುಳಿ ಬಿಡು....

-ಮುಆದ್ (muaadgm)www.facebook.com/muaadgm

ಶುಕ್ರವಾರ, ಡಿಸೆಂಬರ್ 5, 2014

(ಸಂಪೂರ್ಣವಾಗಿ ಓದಿ)
ಗೆಳತೀ,

ಕಣ್ಣಿನಲಿ ರಕ್ತ ಹೆಪ್ಪುಗಟ್ಟಿದೆ,
ನನಗರಿಯದೇ ಕಣ್ಣುಗಳು ಬೆವೆತಿದೆ,
ನಾನಳುತಿಲ್ಲ,
ನನ್ನ ಕಣ್ಣುಗಳು ಅಳುತಿವೆ
ನಾ ಸೋತಿಲ್ಲ,
ನನ್ನ ಕಣ್ಣುಗಳು ಸೋಲುತಿವೆ,

ಗೆಳತೀ,
ಅಸ್ತಮಾನದ ಸೂರ್ಯನಂತೆ
 ಕಣ್ಣುಗಳೆರಡೂ ಕೆಂಪಡರಿದೆ...
ಪ್ರಿಯೇ,
ತಪ್ಪು ತಿಳಿಯದಿರು,
ಇದು ಇದು ನಿನ್ನ ಒಲವಿನ ಸಂಚಿಯ 
ಮೊಗೆದು ಬಂದಿಹ ವೇದನೆಯಲ್ಲ...
" ಈಗ ಕಣ್ಣುನೋವಿನ ಸೀಸನ್ (Season) ಅಲ್ವಾ "
ಕೆರೆಯುವಿಕೆಯಲ್ಲೂ ಒಂದು ಸುಖ   
‪#‎RedEyeMode‬
-ಮುಆದ್-

ಗುರುವಾರ, ಡಿಸೆಂಬರ್ 4, 2014

ಕಳೆದು ಹೋದವರು

ಓ ನೀರಿನ ಒರತೆಯೇ...!,
ನೀನೇಕೆ ನಮಗರಿಯದೇ ಬಂದು
 ನನ್ನಪ್ಪನ ಬಡ ಶ್ವಾಸಕೋಶದೊಳು
 ಹುದುಗಿ ಸುಮ್ಮನೇ ಉಸಿರುಕಟ್ಟಿಸುತಿರುವಿ?  


ಹೋಗು,
ತುಟಿಯಂಚಿನ ಪಸೆಯಾರಿ
 ನಿನ್ನ ಬರವನ್ನು ಎದುರುನೋಡುತಿರುವ 
ಬರಗಾಲ ಪೀಡಿತ ಬಡವನೆಡೆಗೆ,

ಸದ್ಯಕೆ,
ನಮಗೆ ಬರಗಾಲವಿರುವುದು
 ನೀರಿನ ಹನಿಗಲ್ಲ,
ದವಾಖಾನೆಗೆ ಕಟ್ಟಬೇಕಾದ
 ಕಟ್ಟು ಕಟ್ಟು 'ಮನಿ'ಗೆ(Money)
;-(
-ಮುಆದ್-
at S.C.S hospital mangalore

ಶುಕ್ರವಾರ, ಡಿಸೆಂಬರ್ 20, 2013

   ಕುಟುಂಬ ಎಂಬ ಪದಕ್ಕೆ ಡಿಕ್ಷನರಿಯಲ್ಲಿ, ‘ಮನೆಯೊಳಗಿರುವ ತಂದೆ-ತಾಯಿ, ಪತ್ನಿ-ಮಕ್ಕಳು ಮೊದಲಾದ ಎಲ್ಲ ಸಂಬಂಧಿಕರು..’ ಎಂಬ ಅರ್ಥ ಇದೆ. ಇಂಥ ಹಲವು ಕುಟುಂಬಗಳು ಒಟ್ಟು ಸೇರಿ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮದುವೆ, ಮುಂಜಿ, ಹೆರಿಗೆ, ಬಾಣಂತನಗಳು ಆ ಸಮಾಜದ ಭಾಗವಾಗುತ್ತದೆ. ಶಾಲೆ-ಕಾಲೇಜುಗಳು ಅಸ್ತಿತ್ವಕ್ಕೆ ಬರುತ್ತವೆ. ಗರ್ಭಿಣಿ ಪತ್ನಿಯನ್ನು ಪತಿ ನಿತ್ಯ ಕಣ್ತುಂಬಿಕೊಳ್ಳುತ್ತಾನೆ. ಆಕೆಯ ಹೊಟ್ಟೆಗೆ ತಲೆಯಿಟ್ಟು ಮಗುವಿನೊಂದಿಗೆ ಮಾತಾಡುತ್ತಾನೆ. ಮಗು ಹೆಣ್ಣೋ-ಗಂಡೋ ಎಂಬ ಚರ್ಚೆ-ತಮಾಷೆಗಳು ಅವರಿಬ್ಬರ ನಡುವೆ ನಡೆಯುತ್ತದೆ. ಆಕೆಯ ಸಂಕಟ, ಹೆರಿಗೆಯ ದಿನಾಂಕ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಹೆರಿಗೆಗಾಗಿ ದಾಖಲಾಗಬೇಕಾದ ಆಸ್ಪತ್ರೆ.. ಎಲ್ಲವೂ ಮನೆಯಲ್ಲಿ ಚರ್ಚೆಗೊಳಗಾಗುತ್ತದೆ. ಅತ್ತೆ-ಮಾವ, ನಾದಿನಿ, ಮೈದುನ.. ಎಲ್ಲರ ಕುತೂಹಲ-ಕಾಳಜಿಯ ಕೇಂದ್ರವಾಗಿ ಗರ್ಭಿಣಿ ಮಾರ್ಪಡುತ್ತಾಳೆ. ಅತ್ತೆ ಮನೆಯಲ್ಲೂ, ತವರು ಮನೆಯಲ್ಲೂ ಆಕೆಯದೇ ಸುದ್ದಿ. ಇನ್ನು, ಪ್ರಸವವಾದರಂತೂ ಈ ಎರಡು ಕುಟುಂಬಗಳಲ್ಲಿ ಮಾತ್ರವಲ್ಲ, ಆ ಕುಟುಂಬಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲ ಕುಟುಂಬಗಳೂ ಸಂತಸ ವ್ಯಕ್ತಪಡಿಸುತ್ತವೆ. ಶುಭಾಶಯ ಕೋರುವುದು, ಸಿಹಿ ಹಂಚುವುದು ನಡೆಯುತ್ತದೆ. ಬಳಿಕ ಮಗುವಿಗೆ ಹೆಸರಿಡುವ ಸಂಭ್ರಮ. ಮಗು ನಡೆದಂತೆ ಮನೆಯವರೂ ನಡೆಯುತ್ತಾರೆ. ಅದು ಮಾತಾಡಿದಂತೆ ಮನೆಯವರೂ ಮಾತಾಡುತ್ತಾರೆ. ಮನೆಯೊಳಗಿನ ಸಣ್ಣ ಪುಟ್ಟ ಮನಸ್ತಾಪಗಳನ್ನೆಲ್ಲ ಮಗು ತನ್ನ ಮುಗ್ಧತನದ ಮೂಲಕ ನಿವಾರಿಸಿ ಬಿಡುತ್ತದೆ. ಮಗು ಬೆಳೆದಂತೆ ಶಾಲೆಗೆ ಸೇರಿಸಲಾಗುತ್ತದೆ. ಮಗು ಶಾಲೆಯಲ್ಲಿ ಕಲಿತದ್ದನ್ನು, ಆಡಿದ್ದನ್ನು ಮನೆಯಲ್ಲಿ ಬಂದು ಹೇಳುವಾಗ, ಒಂದು ಬಗೆಯ ಕಲರವ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಮಗು ಬೆಳೆಯುವುದು, ಉದ್ಯೋಗಿಯಾಗುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಾಗುವುದು ಮತ್ತು ಅಜ್ಜ-ಅಜ್ಜಿಯಾಗಿ ಅಪ್ಪ-ಅಮ್ಮ ಪರಿವರ್ತಿತಗೊಳ್ಳುವುದು.. ಇಂಥ ಪ್ರಕ್ರಿಯೆಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರುತ್ತದೆ. ಒಂದು ವೇಳೆ, ಇಂಥ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದೇ ಹೋದರೆ ಏನಾದೀತು? ಗಂಡು-ಗಂಡನ್ನೇ ವಿವಾಹವಾಗುವುದು ಅಥವಾ ಹೆಣ್ಣು-ಹೆಣ್ಣನ್ನೇ ವಿವಾಹವಾಗುವುದಾದರೆ ಈ ಸಮಾಜದ ಅಸ್ತಿತ್ವ ಎಲ್ಲಿಯ ವರೆಗೆ ಉಳಿದೀತು? ಗಂಡು-ಗಂಡಿನ ಅಥವಾ ಹೆಣ್ಣು-ಹೆಣ್ಣಿನ ಸಂಬಂಧದಿಂದ ಲೈಂಗಿಕ ಸುಖಗಳ ವಿನಿಮಯ ನಡೆಯಬಲ್ಲುದೇ ಹೊರತು ಮಾನವ ಜನಾಂಗದ ವಿಸ್ತರಣೆಯಲ್ಲವಲ್ಲ. ಅಲ್ಲಿ ಗರ್ಭಧಾರಣೆಯಿಲ್ಲ. ಪತಿ-ಪತ್ನಿ ಎಂಬ ಎರಡು ನೈಸರ್ಗಿಕ ಪ್ರಬೇಧಗಳಿಲ್ಲ. ಮಗುವಿನ ಜನನವಿಲ್ಲ. ಆದ್ದರಿಂದಲೇ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಂಬ ಅಪ್ಯಾಯಮಾನವಾದ ಗುರುತುಗಳಿಗೂ ಅವಕಾಶ ಇಲ್ಲ. ಇಬ್ಬರ ಸಂಬಂಧದೊಂದಿಗೆ ಪ್ರಾರಂಭವಾಗಿ ಅವರೊಂದಿಗೇ ಕೊನೆಗೊಳ್ಳುವ ಒಂದು ಜೀವನ ಕ್ರಮವು ಭವಿಷ್ಯದಲ್ಲಿ ಎಂಥ ವಾತಾವರಣವನ್ನು ಉಂಟು ಮಾಡೀತು? ಮಾನವ ಸಂತತಿಯ ವಿಸ್ತರಣೆ ಎಂಬುದು ಪ್ರಕೃತಿಯ ಸಹಜ ನಿಯಮ. ಮಾನವರಲ್ಲೂ ಪ್ರಾಣಿಗಳಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುವುದರಿಂದಲೇ ನಾಡು ಮತ್ತು ಕಾಡಿನಲ್ಲಿ ಜೀವಂತಿಕೆ ತುಂಬಿಕೊಂಡಿದೆ. ಅಂದಹಾಗೆ, ಹುಲಿಯ ಸಂತತಿಯನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯವಸ್ಥೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದು ಆಗಾಗ ಸುದ್ದಿಗೊಳಗಾಗುತ್ತಿರುತ್ತವೆ. ಬೇರೆ ಬೇರೆ ತಳಿಯ ಹುಲಿ, ಸಿಂಹಗಳ ಸಂಖ್ಯೆಯನ್ನು ಎಣಿಸುವ ಮತ್ತು ಅದರ ವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ, ಗಂಡು ಹುಲಿ ಹೆಣ್ಣಿನ ಬದಲು ಗಂಡನ್ನೇ ಆಯ್ಕೆ ಮಾಡಿಕೊಳ್ಳುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಹುಲಿಗಳ ಸಂತತಿಯ ಗತಿ ಏನಾಗಬಹುದು? ಕೆಲವು ವರ್ಷಗಳಲ್ಲೇ ಹುಲಿ, ಸಿಂಹಗಳು ಇತಿಹಾಸದ ಪುಟ ಸೇರುವುದಕ್ಕೆ ಸಾಧ್ಯವಿದೆಯಲ್ಲವೇ? ಹೀಗಿರುವಾಗ, ಮಾನವ ಸಂತತಿಯನ್ನೇ ಬೆಳೆಸದ ಸಲಿಂಗ ರತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸಿದರೆ ಭವಿಷ್ಯದ ಅನಾಹುತಕ್ಕೆ ಯಾರು ಹೊಣೆ ಹೊರಬೇಕು?
 ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಮಾನವ ಸಂತತಿಯ ವೃದ್ಧಿಗಷ್ಟೇ ಕಾರಣವಾಗುವುದಲ್ಲ, ಸಮಾಜದಲ್ಲಿ ಜವಾಬ್ದಾರಿಯ ಪ್ರಜ್ಞೆ, ಕರುಣೆ, ಅನುಕಂಪ, ಮಾನವೀಯತೆಯ ಪ್ರಜ್ಞೆಯನ್ನೂ ಅದು ಬೆಳೆಸುತ್ತದೆ. ದಾಂಪತ್ಯ ಎಂಬುದು ಬರೇ ದೈಹಿಕ ಸುಖಕ್ಕಷ್ಟೇ ಮೀಸಲಾದ ಸಂಬಂಧ ಅಲ್ಲ. ಅಲ್ಲಿ ಪರಸ್ಪರ ಜವಾಬ್ದಾರಿಯಿದೆ. ಕೊಡು-ಕೊಳ್ಳುವಿಕೆಯಿದೆ. ಪ್ರೀತಿ-ಅನುಕಂಪಗಳ ಒರತೆಯಿದೆ. ಪತಿ-ಪತ್ನಿಯರಾಗಿ, ಹೆತ್ತವರಾಗಿ, ಅಜ್ಜ-ಅಜ್ಜಿಯರಾಗಿ ದಂಪತಿಗಳು ಮಾರ್ಪಡುವ ಒಂದು ಅದ್ಭುತ ಪರಿಕಲ್ಪನೆಯನ್ನು ಸಲಿಂಗರತಿಯ ಜೋಡಿಗಳಿಂದ ನಿರೀಕ್ಷಿಸಲು ಸಾಧ್ಯವೇ? ಅಲ್ಲಿ ಹೊಣೆಗಾರಿಕೆಗಳು ಕಡಿಮೆ. ಲೈಂಗಿಕ ಸುಖಕ್ಕಿಂತ ಹೊರತಾದ ಇನ್ನಾವ ಉದ್ದೇಶಗಳೂ ಆ ಜೋಡಿಗಳ ನಡುವೆ ಇರುವ ಸಾಧ್ಯತೆ ಇಲ್ಲ. ಮಕ್ಕಳ ಜನನಕ್ಕೆ ಅವಕಾಶವೇ ಇಲ್ಲದಿರುವುದರಿಂದ ಸಾಮಾಜಿಕ ಜವಾಬ್ದಾರಿಗಳೂ ಇರುವುದಿಲ್ಲ. ಶಾಲೆಗಳ ಅಗತ್ಯವೂ ಇಲ್ಲ. ಒಂದು ಬಗೆಯ ಒಣ ವಾತಾವರಣವನ್ನು ಸೃಷ್ಟಿ ಮಾಡುವ ಈ ಮಾದರಿಯ ಜೀವನ ವಿಧಾನವನ್ನು ನಾವು ಬೆಂಬಲಿಸತೊಡಗಿದರೆ ಅದರಿಂದ ಸಮಾಜಕ್ಕಾಗುವ ಲಾಭವಾದರೂ ಏನು?
   ನಿಜವಾಗಿ, ಹೆಣ್ಣು-ಹೆಣ್ಣಿನಿಂದ ಮತ್ತು ಗಂಡು-ಗಂಡಿನಿಂದ ಆಕರ್ಷಣೆಗೆ ಒಳಗಾಗುವುದು ಮತ್ತ ದೈಹಿಕ ಸಂಬಂಧವನ್ನು ಬೆಳೆಸುವುದೆಲ್ಲ ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯೇನಲ್ಲ. ಅನಾದಿ ಕಾಲದಿಂದಲೂ ಇಂಥ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿದೆ. ಮಾತ್ರವಲ್ಲ, ಧರ್ಮ ಅದನ್ನು ಅಪರಾಧವೆಂದೇ ಪರಿಗಣಿಸಿದೆ (ಪವಿತ್ರ ಕುರಾನ್  29:28-29) ಇಷ್ಟಕ್ಕೂ, ಯಾವುದೇ ಒಂದು ಕ್ರಿಯೆಗೂ ಬಲವಾದ ಅಡಿಪಾಯ ಇರಲೇಬೇಕು. ನಿದ್ದೆಗೆ, ಊಟಕ್ಕೆ, ದುಡಿಮೆಗೆ, ಮದುವೆಗೆ.. ಹೀಗೆ ಎಲ್ಲದಕ್ಕೂ ಅದರದೇ ಆದ ಉದ್ದೇಶ, ಫಲಿತಾಂಶಗಳು ಇರುತ್ತವೆ. ನಿದ್ದೆ ಮಾಡುವುದರಿಂದ ಮರುದಿನದ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಊಟ ಮಾಡದೇ ಇದ್ದರೆ ಮರುದಿನ ಹುರುಪಿನಿಂದ ಬದುಕಲು ಸಾಧ್ಯವಾಗುವುದಿಲ್ಲ. ದುಡಿಮೆಯ ಉದ್ದೇಶ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದುಕನ್ನು ಸಂತಸವಾಗಿಡುವುದೂ ಆಗಿರುತ್ತದೆ. ಕೇವಲ ದೈಹಿಕ ಸುಖವನ್ನು ಪಡಕೊಳ್ಳುವ ಉದ್ದೇಶಕ್ಕಿಂತಲೂ ಬದುಕಿನ ಸೌಂದರ್ಯ, ಸಂತಾನ ವೃದ್ಧಿಯ ಗುರುತರ ಹೊಣೆಗಾರಿಕೆಯೂ ಮದುವೆಗಿದೆ. ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳಲ್ಲಿ ಒಂದು ತತ್ವವಿದೆ. ಹೊಣೆಗಾರಿಕೆಯಿದೆ. ಆದರೆ ಗಂಡು-ಗಂಡು ಜೋಡಿಯಾಗಿ ದಂಪತಿಗಳಂತೆ ಬದುಕುವುದರ ಹಿಂದೆ ದೈಹಿಕ ಸುಖದ ವಿನಿಮಯದ ಹೊರತಾದ ಇನ್ನಾವ ತರ್ಕಗಳೂ ಕಾಣಿಸುತ್ತಿಲ್ಲ. ಆ ಸುಖವನ್ನು ಪಡಕೊಂಡ ಬಳಿಕ ಏನು ಎಂಬ ಪ್ರಶ್ನೆಗೆ ಯಾವ ಉತ್ತರವೂ ಲಭಿಸುತ್ತಿಲ್ಲ. ಒಂದು ವೇಳೆ ಅವರಿಬ್ಬರ ದೈಹಿಕ ಸೌಂದರ್ಯ ಕ್ಷೀಣಿಸಿದ ಮೇಲೆ ಆ ಸಂಬಂಧ ಎಲ್ಲಿಯ ವರೆಗೆ ಬಾಳಿಕೆ ಕಂಡೀತು? ಆಕರ್ಷಣೆ ಕಳಕೊಂಡ ಬಳಿಕ ಅವರಿಬ್ಬರೂ ಬೇರೆ ಬೇರೆಯಾದರೆ, ಅವರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಕ್ಕಳಿಲ್ಲದ, ಹೆತ್ತವರೂ ಆಗದ ಇವರಿಂದ ಸಮಾಜದ ಅಭಿವೃದ್ದಿsಗೆ ಯಾವ ಕೊಡುಗೆಯಿರುತ್ತದೆ? ಒಣಗಿದ ಗದ್ದೆಗಳು, ಮುಚ್ಚಿದ ಮನೆಗಳು, ಉದ್ಯೋಗಿಗಳಿಲ್ಲದ ಕಾರ್ಖಾನೆಗಳ ಒಂದು ಚಿತ್ರಣವನ್ನು ಕಲ್ಪಿಸಿಕೊಂಡರೇನೇ ಸಲಿಂಗ ರತಿಯ ಅನಾಹುತ ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನಗಳು ನಡೆಯಬೇಕಾಗಿದೆ. ಇದಕ್ಕೆ ಬೆಂಬಲ ಸಿಗದಂಥ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲದೇ ಹೋದರೆ ಚೈತನ್ಯವನ್ನು ಕಳೆದುಕೊಂಡ ಒಣ ಮನುಷ್ಯರನ್ನಷ್ಟೇ ಭವಿಷ್ಯದಲ್ಲಿ ನೋಡಬೇಕಾದೀತು. 


ak kukkila