ಬುಧವಾರ, ನವೆಂಬರ್ 2, 2016

ಅಪ್ಪ ಅಂದರೆ....!!

ಮರೆತು ಬಿಡಬೇಕಿದೆ ಎಲ್ಲವೂ
ಊರಾಚೆಗಿನ ಬಯಲು
ಅಪ್ಪನ ಹಳೆ ಸೈಕಲ್
ಮುಟ್ಟಿದರೆ ಮುನಿಯುವ ಕರಿಯ ಆಡು
ಅಪ್ಪನ ಬೀಡಿಬ್ರಾಂಚಿನ ಘಾಟು
ನಿನ್ನೆ ಬಸ್ಸಲಿ ನನ್ನ ಪಕ್ಕ
ಯಾರೋ ಮುದುಕನೋರ್ವ
ಬಂದು ಕುಳಿತಿದ್ದ...
ಯಾಕೋ ನಿನ್ನ ಘಾಟು ತಲೆಯಲಿ
ಕೊರೆಯುತಿತ್ತು.. ಮೌನಿಯಾದೆ
ಆತನ ಹೆಗಲಿಗೆ ತಲೆಯಾನಿಸಿ
ಬಿಕ್ಕಿ ಬಿಕ್ಕಿ ಅತ್ತೆ
ಏನೆಂದು ಕೇಳಲಿಲ್ಲ ಆತ
ಮೆದುವಾಗಿ ತಲೆ ಸವರಿದ
ಇಳಿಯುವಲ್ಲಿ ಇಳಿದು ಹೋದ
ನೀ ಹೋದಂತೆ ತಿರುಗಿಯೂ ನೋಡದೆ...
ಮರೆಯಬೇಕು ಎಲ್ಲವನ್ನೂ
ನಿನ್ನ ಕತ್ತಿಗೆ ಚುಚ್ಚಿದ್ದ ಡಯಾಲಿಸಿಸ್ ನ
ಪೈಪುಗಳ ನೀಳವನು
ನೀ ನನ್ನ ನೋಡಿದ
ಕೊನೇಯ ನೋಟವನು
ವಿಧಿಯಿಲ್ಲದೇ ನಿನ್ನ ಪ್ರೀತಿಯ
ಆಡನ್ನು ಮಾರಿದ ಬಳಿಕ
ನಾವರಿಯದಂತೆ ಮನೆಯ ಹಿಂಬದಿ
ಕಣ್ಣೀರಿಟ್ಟ ಘಳಿಗೆಯನು
ಮರೆಯಾಗುತ್ತೇನೆ ನಾನೂ ಒಂದುದಿನ
ನಿನ್ನಂತೇ ಒಂದಷ್ಟು ನೆನಪುಗಳ
ಬಲ್ಲವರ ಮನದಲಿಟ್ಟು
ನೀ ನೆಟ್ಟ ಕಂಗಿನ ಮರ
ಪಿಂಗಾರವರಳಿಸಿದೆ
ಬಂಗಾರವುದುರಿಸ‌ಲೇಬೇಕು
ಈ ತಗಡು ಜೀವನದಲಿ....

-ಮುಆದ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ